ಸಮುದಾಯ ಬಾನುಲಿ ಕೇಂದ್ರಗಳು ಯುವಜನಾಂಗಕ್ಕೆ ಹತ್ತಿರವಾಗಬೇಕು- ಶ್ಯಾಮ್ ಭಟ್

ಶಕ್ತಿ ಮತ್ತು ಮಿತಿಗಳ ನಡುವೆ ಸಮಾಜ ಹೇಗೆ ಕಾರ್ಯ ನಿರ್ವಹಿಸುತ್ತದೇಯೋ ಅಂತೆಯೇ ಅಂತರ್ ವಾಣಿ ಸಮುದಾಯ ಬಾನುಲಿ ತನ್ನ ಕಾರ್ಯಗಳನ್ನು ನಿರ್ದಿಷ್ಟ ಯೋಜನೆಗಳ ಮೂಲಕ ಮಾಡುತ್ತಿದೆ. ಬಾನುಲಿ ಕೇಂದ್ರದ ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ಸಾಕಷ್ಟು ಜನಮನ್ನಣೆ ಇದೆ. ’ಅಮೃತಘಳಿಗೆ’ ಕಾರ್ಯಕ್ರಮ ದೊಡ್ಡಾಟ ಮತ್ತು ಬಯಲಾಟಗಳಲ್ಲಿನ ಗೀಗೀಪದಗಳ ಸಾರಂಶ ತಿಳಿಸುವ ಪ್ರಮುಖ ಕಾರ್ಯಕ್ರಮ ಎಂದು ಕಲಬುರ್ಗಿ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಂತರ್ ವಾಣಿಯ ಪ್ರತಿನಿಧಿ ಬಸವರಾಜ್ ಶಾಸ್ತ್ರಿ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ, ರೇಡಿಯೋ ಪಾಂಚಜನ್ಯ 90.8 ಎಫ್.ಎಮ್ ಸಮುದಾಯ ಬಾನುಲಿ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ ಅಖಿಲ ಕರ್ನಾಟಕ ಸಮುದಾಯ ಬಾನುಲಿ ಸಮ್ಮೇಳನದಲ್ಲಿ ’ಸಮುದಾಯ ಬಾನುಲಿ, ನೆಲೆ-ಬೆಲೆ’ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.

ತುಮಕೂರಿನ ’ರೇಡಿಯೋ ಸಿದ್ದಾಥ್’ನ ಪ್ರತಿನಧಿ ರಶ್ಮಿ ಅಮ್ಮೆಂಬಳ ಮಾತನಾಡಿ ರೇಡಿಯೋ ಸಿದ್ದಾಥ್’ ಮಕ್ಕಳಿಂದ ಹಿರಿಯ ನಾಗರಿಕರವರೆಗೆ ತಲುಪುವಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ.’ಅಕ್ಕಕೇಳಕ್ಕ’, ’ಅಮಲಿನ ಕಥೆಗಳು’ ಕಾರ್ಯಕ್ರಮ ಸಮಾಜದಲ್ಲಿ ಸಂಚಲನ ಮೂಡಿಸಿ ಬದಲಾವಣೆಗೆ ನೆರೆವಾದ ಕಾರ್ಯಕ್ರಮಗಳು. ವಿಕಲ ಚೇತನರಿಗೆ ವಿಶೇಷ ತರಗತಿಗಳನ್ನು ಆಯೋಜಿಸಿ ನೆರವಾಗುವುದು ಸಂಸ್ಥೆಯ ಮುಖ್ಯ ಯೊಜನೆಗಳಲ್ಲಿ ಒಂದು. ಸಮುದಾಯ ಬಾನುಲಿ ಕೇಂದ್ರಗಳು ಹಲವು ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುವ ಈ ಸಂದರ್ಭದಲ್ಲಿ ಕರ್ನಾಟಕ ಸಮುದಾಯ ಬಾನುಲಿ ಸಂಘದ ಅವಶ್ಯಕತೆ ಇದೆ ಎಂದು ಹೇಳಿದರು.

ಸಮನ್ವಯಕಾರರಾಗಿ ಭಾಗವಹಿಸಿದ್ದ ರೇಡಿಯೋ ಮಣಿಪಾಲದ ಪ್ರತಿನಿಧಿ ಶ್ಯಾಮ ಭಟ್ ಮಾತನಾಡಿ ಸಮುದಾಯ ಬಾನುಲಿ ಅಥವಾ ಯಾವುದೇ ಮಾಧ್ಯಮ ಯುವಕರನ್ನು ತಲುಪುವಲ್ಲಿ ಹೆಚ್ಚಿನ ಪ್ರಯತ್ನ ಮಾಡಬೇಕು. ಮುಂದಿನ ಜನಾಂಗಕ್ಕೆ ಈ ಕುರಿತು ಆಸಕ್ತಿ ಮೂಡಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಹಲವು ಸಮುದಾಯ ಬಾನುಲಿ ಕೇಂದ್ರಗಳು ಸಮ್ಮಿಲನ ಗೊಂಡಿರುವ ಈ ವೇದಿಕೆಯಲ್ಲಿ ಪರಸ್ಪರ ಕೊಡುಕೊಳ್ಳುವಿಕೆ ಮತ್ತು ಚಿಂತನೆಗಳ ವಿನಿಮಯದ ಕುರಿತು ತರ್ಕಿಸಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಗೋಷ್ಠಿಯಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ರೇಡಿಯೋ ಸಾರಂಗ್‌ನ ಡಾ. ಮೆಲ್ವಿನ್ ಪಿಂಟೋ,ಬೆಳಗಾವಿಯ ’ನಮ್ಮೂರ ಬಾನುಲಿ’ಯ ಪ್ರತಿನಿಧಿ ಕಿರಣ್, ಉಜಿರೆ ಎಸ್.ಡಿ.ಎಂ ಕಾಲೇಜಿನ ’ರೇಡಿಯೋ ನಿನಾದ’ದ ಪ್ರತಿನಿಧಿ ಶಿವಶಂಕರ್, ನಾರಯಣ ಹೃದಯಾಲಯದ ’ನಮ್ಮನಾಡಿ’ ಕೇಂದ್ರದ ಪ್ರತಿನಿಧಿ ವರುಣ್, ಬೆಂಗಳೂರು ಗ್ರಾಮಂತರ ಸಾರಥಿ ಕೇಂದ್ರದ ಪ್ರತಿನಿಧಿ ಸುನಿಲ್, ರೇಡಿಯೋ ಆಕ್ಟಿವ್ ಪ್ರತಿನಿಧಿ ಮಂಜುಳಾ ತಮ್ಮ ಸಮುದಾಯ ಬಾನುಲಿ ಕೇಂದ್ರದ ವಿಶೇಷತೆಯ ಕುರಿತು ಮಾತನಾಡಿದರು.

ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಹೆಚ್.ಜಿ. ಶ್ರೀಧರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರೇಡಿಯೋ ಪಾಂಚಜನ್ಯ ಸಮುದಾಯ ಬಾನುಲಿ ಕೇಂದ್ರದ ನಿರ್ದೇಶಕಿ ಶಿಲ್ಪಾ ವಂದಿಸಿದರು.

Back To Top